ಹ್ಯಾಲೊಜನ್‍ಗಳು
	ಆವರ್ತಕೋಷ್ಟಕದ 7ಬಿ ಗುಂಪಿನ ಐದು ರಾಸಾಯನಿಕಪಟು ಅಲೋಹಧಾತುಗಳು: ಫ್ಲೂರೀನ್ . ಕ್ಲೋರೀನ್ , ಬ್ರೋಮೀನ್ , ಅಯೊಡೀನ್ (I) ಮತ್ತು ಆಸ್ಟಟೀನ್ . ಇವುಗಳ ಪೈಕಿ ಆಸ್ಟಟೀನ್ ಮಾತ್ರ ಅಲ್ಪಾಯು ವಿಕಿರಣಪಟು ಧಾತು. ಇದರ ಸಮಸ್ಥಾನಿಗಳ ಪೈಕಿ ಂಣ210 ಅತ್ಯಂತ ದೀರ್ಘಾಯು (ಅರ್ಧಾಯುಷ್ಯ: 8.3 ಗಂಟೆ). ಎಂದೇ, ಇತರ ಹ್ಯಾಲೊಜನುಗಳ ಗುಣಗಳನ್ನು ಇದಕ್ಕೆ ಅನ್ವಯಿಸಕೂಡದು. ಹ್ಯಾಲೊಜನ್‍ಗಳು ನಿಸರ್ಗದಲ್ಲಿ ಸಂಯುಕ್ತಗಳ ರೂಪದಲ್ಲಿ ಮಾತ್ರ ಲಭ್ಯ.

	ಗ್ರೀಕ್ ಭಾಷಾಮೂಲದ ಹ್ಯಾಲೊಜನ್ ಪದದ ಅರ್ಥ: ಲವಣೋತ್ಪಾದಕಗಳು. ಪ್ರತಿಯೊಂದು ಹ್ಯಾಲೊಜನ್ನೂ ಸೋಡಿಯ ಮಿನೊಂದಿಗೆ ವರ್ತಿಸಿ ಸಂಬಂಧಿತ ಲವಣ ಉತ್ಪಾದಿಸುವುದರಿಂದ ಈ ಹೆಸರು. ವಾಸ್ತವವಾಗಿ ಇವು ಹೈಡ್ರೊಜನಿನೊಂದಿಗೆ ವರ್ತಿಸಿ ಆಮ್ಲಗ ಳನ್ನೂ ಲೋಹಗಳೊಂದಿಗೆ ಹ್ಯಾಲೈಡುಗಳು ಎಂಬ ಲವಣಗಳನ್ನೂ ಅಲೋಹಗಳೊಂದಿಗೆ ಸಂಕೀರ್ಣ ಅಯಾನುಗಳನ್ನೂ ರೂಪಿಸುತ್ತವೆ. ಈ ಧಾತುಗಳ ಪರಮಾಣುಗಳ ಹೊರಕವಚದ ಎಲೆಕ್ಟ್ರಾನ್ ವಿನ್ಯಾಸ: ಟಿs2, ಟಿಠಿ5. ಸಾಮಾನ್ಯ ಉತ್ಕರ್ಷಣ ಸ್ಥಿತಿಗಳು -1, +1, +3, +5, +7. ಕೆಲವು ಸಂಯುಕ್ತಗಳಲ್ಲಿ +4, +6 ಇರುವುದೂ ಉಂಟು. 

	ಫ್ಲೂರೀನಿನಿಂದ ಅಯೊಡೀನ್ ವರೆಗಿನ ಹ್ಯಾಲೊಜನ್ ಶ್ರೇಣಿಯಲ್ಲಿ ಧಾತುಗಳ ಪರಮಾಣು ತೂಕದ ಏರಿಕೆಗೆ ಅನುಗುಣವಾಗಿ ಅವುಗಳ ಸಾಂದ್ರತೆ, ದ್ರವನಬಿಂದು, ಕುದಿಬಿಂದು, ಅವಧಿಕ ತಾಪ ಹಾಗೂ ಸಂಮರ್ದ, ಸಂಲಯನ ಹಾಗೂ ಬಾಷ್ಪೀಕರಣ ಉಷ್ಣ ಇವೂ ಏರುತ್ತವೆ. ಅಲ್ಲದೆ, ಬಣ್ಣವೂ ಗಾಢವಾಗುತ್ತದೆ. ಉತ್ಕರ್ಷಣ ಸಾಮಥ್ರ್ಯ ಹಾಗೂ ಅಯಾನೀಕರಣ ಶಕ್ತಿ ಮಾತ್ರ ಕಡಿಮೆಯಾಗುತ್ತದೆ. ಹ್ಯಾಲೊಜನುಗಳ ಗುಣಗಳಲ್ಲಿ ಇರುವ ಸಾಮ್ಯ ಮತ್ತು ಭಿನ್ನತೆಗಳಿಗೆ ಅವುಗಳ ಎಲೆಕ್ಟ್ರಾನ್ ವಿನ್ಯಾಸದ ವಿಶಿಷ್ಟತೆಗಳೇ ಕಾರಣ. 

	ಒಂದು ಸಹವೇಲೆನ್ಸೀಯ ಬಂಧವುಳ್ಳ ದ್ವಿಪರಮಾಣು ಅಣುರೂಪ ದಲ್ಲಿ ಹ್ಯಾಲೊಜನ್ ಧಾತುಗಳ ಅಸ್ತಿತ್ವ. ತಕ್ಕಮಟ್ಟಿಗೆ ಬಲಯುತವಾದ ಪರಮಾಣುಬಂಧವಿದ್ದರೂ ವ್ಯಾನ್‍ಡೆರ್ ವಾಲ್ಸ್ ಬಲಗಳನ್ನು ಅವಲಂಬಿ ಸಿರುವ ಅಣುಗಳ ಪರಸ್ಪರ ಆಕರ್ಷಣ ಸಾಮಥ್ರ್ಯ ದುರ್ಬಲವಾಗಿದೆ. ವ್ಯಾನ್‍ಡೆರ್ ವಾಲ್ಸ್ ಬಲಗಳಿಗೂ ಅಣುವಿನಲ್ಲಿ ಇರುವ ಒಟ್ಟಾರೆ ಎಲೆಕ್ಟ್ರಾನುಗಳ ಸಂಖ್ಯೆಗೂ ಸಂಬಂಧವಿದೆ. ಎಂದೇ, ಕೊಠಡಿ ತಾಪದಲ್ಲಿ ಫ್ಲೂರೀನ್ ಮತ್ತು ಕ್ಲೋರೀನ್‍ಗಳದ್ದು ಅನಿಲ ಸ್ಥಿತಿ, ಬ್ರೋಮೀನ್‍ನದ್ದು ದ್ರವ, ಅಯೊಡೀನ್‍ನದ್ದು ಘನ.								
		(ಕೆ.ಸಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ